Tuesday, April 28, 2009

ಒಂದು ಫೋಟೋ ..


ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ತಮ್ಮ ಜೀವನದ ಕೊನೆಯ ಯಕ್ಷಗಾನ ಶಾಂಭವಿ ವಿಲಾಸ ಪ್ರಸಂಗದ ಪ್ರದರ್ಶನದಲ್ಲಿ .....


ಅಪ್ರತಿಮ ಹಿಮ್ಮೇಳ ವಾದಕನಿಗೆ ನುಡಿ ನಮನ ....


ಎಡನೀರು ಮೇಳದವರು " ಜಾಂಬವತಿ ಕಲ್ಯಾಣ -ವೀರ ಅಭಿಮನ್ಯು " ಪ್ರಸಂಗವನ್ನು ಆಡಲಿರುವರು ಎಂಬ ವಿಚಾರ ತಿಳಿದ ನಾವು ಬಸವ ಜಯಂತಿ ಪ್ರಯುಕ್ತ ರಜೆ ಇದ್ದುದರಿಂದ ಈ ಸಲದ ಎಡನೀರು ಮೇಳದ ಒಂದು ಆಟವಾದರೂ ನೋಡಬೇಕೆಂಬ ಆಸೆಯಿಂದ ಬೆಂಗಳೂರಿನ ಕೋರಮಂಗಲದ ಎಡನೀರು ಮಠಕ್ಕೆ ಮಿತ್ರರಾದ ರಾಜಣ್ಣನವರೊಂದಿಗೆ ಸಂಜೆ ಎಳೂಕಾಲರ ಸುಮಾರಿಗೆ ತಲುಪಿದಾಗ ನಮಗೆ "ಚಿಪ್ಪಾರು ಬಲ್ಲಾಳರು " ಇನ್ನಿಲ್ಲ ಎಂಬ ಆಘಾತಕಾರಿ ವಿಷಯ ತಿಳಿಯಿತು .ಕಲಾವಿದರೆಲ್ಲ ದು:ಖಾರ್ತರಾಗಿದ್ದ ಸನ್ನಿವೇಶ ಬಹಳಷ್ಟು ಸಂಕಟವನ್ನು ಉಂಟುಮಾಡಿತು . ಮೃತರ ಗೌರವಾರ್ಥ ಆ ದಿನದ ಆಟವನ್ನು ರದ್ದುಗೊಳಿಸಲಾಯಿತು .


ಚಿಕ್ಕಂದಿನಿಂದಲೂ ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದ ನಮಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು . ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹಿರಿಯ- ಕಿರಿಯ ಕಲಾವಿದರಿಗೆಲ್ಲ ಚೆಂಡೆ ಮದ್ದಲೆ ಸಾಥ್ ನೀಡಿ ಅವರೆಲ್ಲರ ಪದ್ಯಗಳು ಮೆರೆಸುವಂತೆ ಮಾಡಿದ ಖ್ಯಾತಿ ಇವರದ್ದು. ೧೯೨೮ ರ ಎಪ್ರಿಲ್ ೨ ರಂದು ಜನಿಸಿದ ಇವರು ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ ಅನುಭವಿಸಿದವರು. ದಿವಂಗತ ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಕಡತೋಕ -ಬಲ್ಲಾಳರ ಜೋಡಿ ಯಕ್ಷರಂಗ ಕಂಡ ಅದ್ಭುತ .

ಮೂಲ್ಕಿ ಮೇಳದಿಂದ ಆರಂಭಗೊಂಡ ಇವರ ಕಲಾಸೇವೆ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ 50 ವರ್ಷಗಳ ಕಾಲ ಮುಂದುವರಿದು ಮೇಳದಿಂದ ನಿವೃತ್ತರಾದರೂ ಯಕ್ಷಗಾನಗಳಲ್ಲಿ ಸಕ್ರಿಯರಾಗಿದ್ದರು .
ಸದಾ ಸ್ಥಿತಪ್ರಜ್ಞರಂತೆ ಕಾಣುತ್ತಿದ್ದ ಬಲ್ಲಾಳರು ಸಂತೃಪ್ತ ಜೀವನವನ್ನು ನಡೆಸಿದವರು. ಎಡನೀರು ಮೇಳದ ಆಟಕ್ಕೋಸ್ಕರ ಬೆಂಗಳೂರು ನಗರಕ್ಕೆ ಬಂದಿದ್ದ ಇವರು ಚೌಕಿ ಪೂಜೆಯಾಗುತ್ತಿದ್ದಂತೆ ನಮ್ಮನ್ನು ಬಿಟ್ಟು ಅಗಲಿದರು . ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ ... ಎಂಬಂತೆ ಸುಖ ಮರಣವನ್ನು ಪಡೆದ ಇವರು ಧನ್ಯರು.

ಅವರಂತೆ ಚೆಂಡೆ ಮದ್ದಲೆ ನುಡಿಸಬಲ್ಲ ಕಲಾವಿದರು ವಿರಳ .ಹಳೆಯ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಬಲು ದೊಡ್ಡ ನಿರ್ವಾತವನ್ನು ನಿರ್ಮಾಣವಾಯಿತು. ಇದು ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟ . ಅವರ ದಿವ್ಯಾತ್ಮವು ಚಿರ ಶಾಂತಿಯನ್ನು ಹೊಂದಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತೇವೆ..

Thursday, April 2, 2009

ಯಕ್ಷಗಾನ ಪತ್ರಿಕೆಗಳು ......




ಚಿಕ್ಕವನಿದ್ದಾಗ ಉದಯವಾಣಿ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಅಥವಾ ಅಪರೂಪಕ್ಕೊಮ್ಮೆ ಯಕ್ಷಗಾನದ ಕುರಿತಾದ ಲೇಖನಗಳು ಬರುತ್ತಿದ್ದುವು .ಅವನ್ನು ಕುತೂಹಲದಿಂದ ಓದುತ್ತಿದ್ದ ನಮಗೆ ಯಕ್ಷಗಾನಕ್ಕೆ ಮೀಸಲಾಗಿರುವ ಪತ್ರಿಕೆ ಇರಬೇಕಿತ್ತು ಎಂದು ಅನಿಸಿತ್ತು .ಆಗ ನಮಗೆ ಬೇಕಾದ ರಮ್ಯಾದ್ಭುತ ವೇಷಗಳ ಕಪ್ಪು ಬಿಳುಪು ಫೋಟೋಗಳು ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದುದನ್ನು ಕತ್ತರಿಸಿ ಗೇರು ಬೀಜದ ಮರದಿಂದ ಒಸರುವ ಗೋಂದು ಬಳಸಿ ಪುಸ್ತಕವೊಂದರಲ್ಲಿ ಅಂಟಿಸಿ ಇಡುತ್ತಿದ್ದ ನಮಗೆ ಯಕ್ಷಗಾನ ಪತ್ರಿಕೆಗಳ ಬಗ್ಗೆ ಅರಿವಿರಲಿಲ್ಲ .

ಯಕ್ಷಗಾನಕ್ಕೆ ಸೀಮಿತವಾಗಿರಬೇಕೆಂದು ಈ ಹಿಂದೆ ಕಡತೋಕ ಮಂಜುನಾಥ ಭಾಗವತರು "ಯಕ್ಷಗಾನ" ಎಂಬ ಪತ್ರಿಕೆಯನ್ನು ಆರಂಭಿಸಿ ಕೈ ಸುಟ್ಟುಕೊಂಡಿದ್ದರು ಎಂಬ ವಿಚಾರ ಮೊನ್ನೆ ಮನೆಯಲ್ಲಿ ಶ್ರೀ ಕುಬಣೂರು ಶ್ರೀಧರ ರಾಯರ "ಯಕ್ಷಪ್ರಭ " ಮಾಸ ಪತ್ರಿಕೆಯ ಹಳೆಯ ಆವೃತ್ತಿ ನೋಡಿದಾಗ ತಿಳಿದು ಬಂತು. ಈಗ ಆ ಪತ್ರಿಕೆಗೆ ಪುನರ್ಜನ್ಮ ಕೊಟ್ಟು ಆರಂಭಿಸಲಾಗಿದೆ ಎಂಬ ವಿಚಾರ ತಿಳಿದು ಸಂತಸವಾಯಿತು .

ನನಗೆ ತಿಳಿದಂತೆ ಸುಮಾರು ೨೨ ವರ್ಷಗಳಿಂದ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿ ಛಲ ಬಿಡದ ತ್ರಿವಿಕ್ರಮನಂತೆ ಶ್ರೀ ಕುಬಣೂರು ಶ್ರೀಧರ ರಾಯರು ತಮ್ಮ ವೃತ್ತಿ ಜೀವನದ ನಡುವೆಯೂ ಯಕ್ಷ ಪ್ರಭ ಪತ್ರಿಕೆಯನ್ನು ಆನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ . ದಕ್ಷಿಣ ಕನ್ನಡ ,ಉತ್ತರಕನ್ನಡ , ಮುಂಬೈ ,ದುಬೈ ಹಾಗೂ ಬೆಂಗಳೂರಿನ ಮುಖ್ಯ ಕಾರ್ಯಕ್ರಮಗಳ ವಿವರ , ಲೇಖನಗಳು , ದೇಶದ ನಾನಾ ಕಡೆಗಳಲ್ಲಿನ ಯಕ್ಷಗಾನ ಪ್ರದರ್ಶನ, ಸನ್ಮಾನ ,ಸಂಸ್ಮರಣೆ ಇತ್ಯಾದಿ ವಿಷಯಗಳಲ್ಲದೇ ಸಂಗ್ರಹ ಯೋಗ್ಯ ಲೇಖನಗಳು ಮತ್ತು ತಾಳಮದ್ದಲೆ , ಕಟೀಲು, ಧರ್ಮಸ್ಥಳವೆ ಮೊದಲಾದ ಮೇಳಗಳ ಆಯಾ ಮಾಸದ ಆಟದ ವೇಳಾಪಟ್ಟಿ ಯನ್ನು ಒಳಗೊಂಡ ಈ ಪತ್ರಿಕೆಯನ್ನು ಓದುವುದೇ ಒಂದು ಯಕ್ಷ ಕಲಾಭಿಮಾನಿಗಳಿಗೆ ಆನಂದದ ವಿಚಾರ . ಯಕ್ಷಗಾನದ ಕುರಿತು ಹಲವು ಅಂತರ್ಜಲ ತಾಣಗಳಿದ್ದರೂ ಯಕ್ಷಪ್ರಭ ಪತ್ರಿಕೆಯನ್ನು ಬಿಟ್ಟು ಬೇರಾವ ಪತ್ರಿಕೆಯೂ ಯಕ್ಷಗಾನ ಪತ್ರಿಕೆಯಾಗಿ ಮಾರುಕಟ್ಟೆಯಲ್ಲಿ ಸಾರ್ವಭೌಮತ್ವ ಹೊಂದಿಲ್ಲ ಎಂದು ನನ್ನ ಅನಿಸಿಕೆ.

ನಿಮಗೇನನಿಸುತ್ತದೆ ?